Sunday, April 8, 2007

ಗುರುವಂದನೆ (Guru Vandane)

ಮೊನ್ನೆ ೦೧-೦೪-೨೦೦೭ ರಂದು ಸಿದ್ಧಗಂಗಾ ಮಠಾಧೀಶರಾದ ಸ್ವಾಮೀಜಿ ಶ್ರೀ ಶಿವಕುಮಾರ ಸ್ವಾಮಿಗಳಿಗೆ ರಾಜ್ಯ ಸರ್ಕಾರ 'ಕರ್ನಾಟಕ ರತ್ನ' ನೀಡಿತು. ಅಂದು ಸ್ವಾಮೀಜಿಯವರು ನೂರನೇ ವರ್ಷಕ್ಕೆ ಕಾಲಿಟ್ಟ ದಿನ ಕೂಡ. ಸುಮಾರು ೭ ದಶಕಗಳಿಂದ ಅನ್ನ, ಜ್ಞಾನ ದಾಸೋಹಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಈ ಪ್ರಶಸ್ತಿ ನೀಡುವ ಮೂಲಕ ಸರ್ಕಾರ ಈ ಪ್ರಶಸ್ತಿಗೆ ಗೌರವ ತಂದುಕೊಟ್ಟಿದೆ.

ಜಾತಿ-ಮತ ಭೇದ ತೋರದೆ ಸಿದ್ಧಗಂಗಾ ಮಠದ ಸ್ವಾಮೀಜಿಯವರು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ನೆಲೆ ಮತ್ತು ವಿದ್ಯಾಭ್ಯಾಸಕ್ಕೆ ಅವಕಾಶ ಒದಗಿಸಿದ್ದಾರೆ. ಸುಮಾರು ೯೦೦೦ ವಿದ್ಯಾರ್ಥಿಗಳಿಗೆ ಈ ರೀತಿ ಆಶ್ರಯ ದೊರೆತಿದೆ. ಸ್ವಾಮೀಜಿಯವರ ಜೀವನವೇ ಒಂದು ಉತ್ತಮ ಸಂದೇಶ.

ಅನ್ನ, ಜ್ಞಾನ ದಾಸೋಹದ ಸಂತನಿಗೆ ನಮನಗಳು.

ಕರ್ನಾಟಕದ ಮಟ್ಟಿಗೆ ಹೇಳಬೇಕಾದರೆ ಇಲ್ಲಿನ ಮಠಗಳು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸಕ್ಕೆ ಕೊಟ್ಟ ಪ್ರಾಮುಖ್ಯತೆಯ ಫಲವಾಗಿ ಇಂದು ಬೇರೆ ಯಾವುದೇ ರಾಜ್ಯಗಳಿಗಿಂತ ಪ್ರಾಥಮಿಕ, ಮಾಧ್ಯಮ ಶಿಕ್ಷಣ ಉತ್ತಮ ಮಟ್ಟದಲ್ಲಿದೆ. ಈ ಮಠಗಳು ಯಾವುದೇ ರೀತಿಯ ಅಜೆಂಡಾಗಳನ್ನಿಟ್ಟುಕೊಳ್ಳದೇ ಸುಮಾರು ದಶಕಗಳಿಂದ ಕೆಲಸ ಮಾಡುತ್ತಿವೆ. ಸುತ್ತೂರು ಮಠ, ಸಿದ್ಧಗಂಗಾ ಮಠ, ಮೂರು ಸಾವಿರ ಮಠ, ಧರ್ಮಸ್ಥಳ, .. ಈ ರೀತಿ ಸುಮಾರು ಎಲ್ಲ ಸಂಸ್ಥೆಗಳೂ ನಿಸ್ವಾರ್ಥ ಸೇವೆಯಲ್ಲಿ ತೊಡಗಿವೆ. ನನ್ನೂರಿನ ಸುತ್ತೂರು ಮಠದ 'ವಿದ್ಯಾಪೀಠ'ದ ಬಗ್ಗೆ ಹೇಳಬೇಕಾದರೆ, ಮತ್ತೊಂದು ದೊಡ್ಡ ಲೇಖನ ಬೇಕಾಗುತ್ತದೆ.

Wednesday, March 28, 2007

ಡಿ.ವಿ.ಜಿ. (DVG)

ನಮ್ಮ ಸಂಸ್ಥೆಯ ಸಾಹಿತ್ಯಾಸಕ್ತರ ತಿಂಗಳ ಸಭೆ ಎಂದಿನಂತೆ ಉತ್ಸಾಹದಿಂದ ಮುಂದುವರೆಯುತ್ತಿದೆ! ಈ ತಿಂಗಳ ಸಭೆಯಲ್ಲಿ ಡಿ.ವಿ. ಗುಂಡಪ್ಪನವರ ಜೀವನ, ಕೃತಿಗಳ ಬಗ್ಗೆ ಹಲವರು ಮಾತನಾಡಿದರು.

ಡಿ.ವಿ.ಜಿ ಅವರ ಸ್ಥೂಲ ಪರಿಚಯ ಇಲ್ಲಿದೆ.

ಕಾರ್ಯಕ್ರಮದಲ್ಲಿ, ತಮಗಿಷ್ಟವಾದ ಕಗ್ಗ ಪದಗಳ ಬಗ್ಗೆ ಸವಿತಾ, ಕಾರ್ತಿಕ್, ಪದ್ಮನಾಭ ಮತ್ತು ವಿಶ್ವೇಶ್ವರ ಹೆಗಡೆ ತಮ್ಮ ಅನಿಸಿಕೆ/ಅನುಭವ ಗಳನ್ನು ಹಂಚಿಕೊಂಡರು.

ಡಿ.ವಿ.ಜಿ ಮೇಲಿನ ಪದ್ಮನಾಭ ಅವರ ಲೇಖನ 'ಡಿವಿಜಿಯವರ ಮುಕ್ತಕಗಳ ಮೆರುಗು ಹಾಗೂ ಮೌಲ್ಯಗಳ ಹರಹು' ಇಲ್ಲಿ ಮತ್ತು ಇಲ್ಲಿದೆ .

ಇತ್ತೀಚಿನ ಒಂದು ಕಾರ್ಯಕ್ರಮದಲ್ಲಿ ಹಿರಿಯ ಐ.ಎ.ಎಸ್ ಅಧಿಕಾರಿ ಗೋಪಾಲಕೃಷ್ಣೇಗೌಡರು ಕಗ್ಗದ ಅಧ್ಯಯನ ಹೇಗೆ ತಮ್ಮ ವೃತ್ತಿಜೀವನದಲ್ಲಿ ಸಹಾಯ ಮಾಡಿತು ಎಂಬುದನ್ನು ಚೆನ್ನಾಗಿ ವಿವರಿಸಿದರು. ಅವರು ತುಮಕೂರು ಜಿಲ್ಲಾಧಿಕಾರಿಯಾಗಿದ್ದಾಗ ಆದ ಗೋಳೀಬಾರ್, ಚಿಕ್ಕಮಗಳೂರಿನಲ್ಲಿದ್ದಾಗ ನಡೆದ ಗಲಭೆ, ವಿಧಾನ ಮಂಡಲವನ್ನು ನೇರವಾಗಿ ಎದುರಿಸಿ ಉತ್ತರ ಕೊಡಬೇಕಾದ ಸಂದರ್ಭ - ಹೀಗೆ ಇಂತಹ ಸಮಯಗಳಲ್ಲಿ ಕಗ್ಗ ಹೇಗೆ ಎಲ್ಲವನ್ನೂ ಸ್ವೀಕರಿಸಿ , ಎದುರಿಸಲು ಸಹಾಯ ಮಾಡಿತು ಎಂಬುದನ್ನು ತಿಳಿಸಿದರು.

ಉಮರನ ಒಸಗೆ (ಒಸಗೆ = ಸಂದೇಶ, ಸುದ್ದಿ) ಮತ್ತು ಅಂತ:ಪುರ ಗೀತೆಗಳು (ಬೇಲೂರು ಚೆನ್ನಕೇಶವ ಮತ್ತು ಶಿಲಾಬಾಲಿಕೆಯರ ಬಗ್ಗೆ) - ಇವುಗಳ ಬಗ್ಗೆ
ಅನುಪ್ ಸ್ವಾರಸ್ಯವಾಗಿ ವಿವರಿಸಿದರು.

ಹರೀಶರು 'ಸಾಹಿತಿ, ಪತ್ರಿಕೋದ್ಯಮಿ, ಚಿಂತಕ, ದಾರ್ಶನಿಕ' ಡಿ.ವಿ.ಜಿ ಬಗ್ಗೆ ಮಾತನಾಡಿದರು. ಅವರ ಭಾಷಣದ (ನನ್ನ ನೆನಪಿನಲ್ಲುಳಿದಷ್ಟು) ಸಾರಾಂಶ...

ಡಿ.ವಿ.ಜಿ ಅವರು ಮದ್ರಾಸ್ ನ ಒಂದು ಪತ್ರಿಕೆಗೆ ಕೆಲಸ ಮಾಡುತ್ತಿದ್ದಾಗ ಒಬ್ಬ ಸಂಪಾದಕ ಇವರ ಲೇಖನವನ್ನು ಸ್ವಲ್ಪ ತಿರುಚಿ ಬರೆದುದಕ್ಕೆ ತೋರಿದ ಪ್ರತಿಭಟನೆಯೆಂದರೆ ರಾಜಿನಾಮೆ ಕೊಟ್ಟು, ಮೌನವಾಗಿ ಬೆಂಗಳೂರಿನ ರೈಲು ಹಿಡಿದಿದ್ದು!

ಸಂಸ್ಕೃತ ಪಂಡಿತರಾಗಿದ್ದರೂ ಅವರ ಬರವಣಿಗೆಯಲ್ಲಿ ಕಾಣುವುದು ಹೆಚ್ಚಾಗಿ ಕನ್ನಡ ಪದಗಳು. ಇದಕ್ಕೆ ಕಾರಣ ಹಿರಿಯಾರಾದ ಎಸ್.ಜಿ.ನರಸಿಂಹಚಾರ್ ಅವರ ಸಲಹೆಗಳು. ಒಮ್ಮೆ ಡಿ.ವಿ.ಜಿ ಅವರ ಲೇಖನದಲ್ಲಿ 'ಆಧುನಿಕ' ಅನ್ನುವ ಪದದ ಬದಲು 'ಹೊಸದು' ಎಂದು ಉಪಯೋಗಿಸಲು ಸೂಚಿಸಿದರು. ಕಗ್ಗ ಓದಲು ಕೆಲವು ಕಡೆ ನಮಗೆ ಕಷ್ಟವಾಗುವುದು ಕನ್ನಡ ಪದಗಳ ಬಳಕೆಯಿಂದಲೇ!

ಡಿ.ವಿ.ಜಿ ಯವರಿಗೆ ಹೆಂಗಸಿರ ಬಗ್ಗೆ ಬಹಳ ಗೌರವವಿತ್ತು. ಚಿಕ್ಕ ವಯಸ್ಸಿನಲ್ಲೇ ಹೆಂಡತಿಯನ್ನು (ದುರ್ಘಟನೆಯಲ್ಲಿ) ಕಳೆದುಕೊಂಡ ಇವರಿಗೆ ತಾಯಿ ಹಾಗೂ ಬಂಧುಮಿತ್ರರು ಮತ್ತೊಂದು ಮದುವೆಗೆ ಒತ್ತಾಯಿಸಿದಾಗ ಅವರು ಹೇಳಿದ್ದು 'ಮನೆಯಲ್ಲಿ ಒಬ್ಬ ತಂಗಿ ವಿಧವೆ. ಅವಳಿಗೆ ಮದುವೆ ಆಗುವುದು ಕಷ್ಟ, ಅವಳ ಮದುವೆ ಆದ ಮೇಲೆ ನಾನು ಆಗುತ್ತೀನಿ'. ಆಗಿನ ಸಮಾಜದಲ್ಲಿ ವಿಧವಾ ವಿವಾಹ ಕಷ್ಟವಾಗಿತ್ತು ಮತ್ತು ಡಿ.ವಿ.ಜಿಯವರು ಈ ಘಟನೆಯ ಮೂಲಕ ಮಾನವೀಯ ಮೌಲ್ಯವನ್ನು ಮೆರೆದರು. ಇವರ ಈ ಆದರ್ಶದಿಂದ ಟಿ.ಎಸ್. ವೆಂಕಣ್ಣಯ್ಯ ಮತ್ತು ಬಿ.ಎಂ. ಶ್ರೀಕಂಠಯ್ಯನವರು ಪ್ರಭಾವಿತರಾಗಿ ಇದೇ ರೀತಿ ನಡೆದುಕೊಂಡರು.

ಶೇಕ್ಸ್ ಪಿಯರ್ ನ ಹಲವಾರು ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಇವರ ಇಂಗ್ಲಿಷ್ ಭಾಷಾಜ್ಞಾನ ಕೂಡ ಅದ್ಭುತ. ಪಶ್ಚಿಮದೇಶಗಳ ಹಲವಾರು ಕವಿ, ಚಿಂತಕರ ಕೃತಿಗಳನ್ನು ಓದಿದ್ದರು ಮತ್ತು ಅವುಗಳಿಂದ ಪ್ರಭಾವಿತರಾಗಿದ್ದರು.

'ಜ್ಞಾಪಕ ಚಿತ್ರಶಾಲೆ' ಯಲ್ಲಿ ಅವರು ದೇಶದ, ನಾಡಿನ ಮಹಾನ್ ವ್ಯಕ್ತಿಗಳ ಬಗ್ಗೆಯೂ ಬರೆದಿದ್ದಾರೆ...ಬೀದಿಬದಿಯ ಬಡಕುಟುಂಬವನ್ನೂ, ಜನಸಾಮಾನ್ಯರ ಬದುಕು ಔದಾರ್ಯಗಳನ್ನೂ ಚಿತ್ರಿಸಿದ್ದಾರೆ.

'ಸಂಸ್ಕೃತಿ', 'ಬಾಳಿಗೊಂದು ನಂಬಿಕೆ' ಪುಸ್ತಕಗಳಲ್ಲಿರುವ ಚಿಂತನೆ, ವಿಚಾರಗಳನ್ನು ನಾವು ಒಮ್ಮೆಯಾದರೂ ಓದಲೇಬೇಕು.

ರಾಜಕೀಯದಲ್ಲಿ ಸಹ ಇವರಿಗೆ ಆಸಕ್ತಿಯಿತ್ತು. ಅನೇಕ ರಾಜಮಹಾರಾಜರುಗಳು ಪತ್ರದ ಮೂಲಕ ತಮ್ಮ ಸಮಸ್ಯೆಗಳನ್ನು ಬರೆದು ಪರಿಹಾರ ಸೂಚಿಸಲು ಕೋರುತ್ತಿದ್ದರು. ಅಂಬೇಡ್ಕರ್ ಅವರು ತಮ್ಮ ಕೃತಿಗಳ ಕರಡನ್ನು ಕಳಿಸುತ್ತಿದ್ದುದು ಇವರಿಗೆ! ಸರ್ ಎಂ. ವಿಶ್ವೇಶ್ವರಯ್ಯ ನವರ ಆಪ್ತ ಕಾರ್ಯದರ್ಶಿಯಾಗಿ ಸಹ ಇವರು ಕೆಲಸ ಮಾಡಿದ್ದರು. ಅಮೇರಿಕದಲ್ಲಿ ನೆಲೆಸಿದ್ದ ಚಿಂತಕ ಆನಂದ ಕುಮಾರಸ್ವಾಮಿ ಅವರನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಅಲ್ಲಿನ ಪತ್ರಕರ್ತರು 'ಭಾರತಕ್ಕೆ ನಿಮ್ಮ ಸಂದೇಶವೇನು?' ಎಂದು ಕೇಳಿದಾಗ ಅವರು ಗಾಂಧಿ, ಡಿವಿಜಿ ಯವರಂತೆ ಬದುಕಬೇಕು ಎಂದಿದ್ದರು. ದೇಶದ ಈ ಮಹಾನ್ ವ್ಯಕ್ತಿಯನ್ನು ನಾವು ಕೆಲವರು ಕರ್ನಾಟಕಕ್ಕೆ, ಬೆಂಗಳೂರಿಗೆ, ಬಸವನಗುಡಿಗೆ ಸೀಮಿತಗೊಳಿಸಿದ್ದೇವೆ!

Public life must be spiritualized ಎಂಬುದನ್ನು ನಂಬಿದ್ದವರು ಮತ್ತು ಅಕ್ಷರಶಃ ಪಾಲಿಸಿದವರು ಡಿ.ವಿ.ಜಿ.

Sunday, March 18, 2007

ಆವರಣ ಸಂವಾದ - ೨ (AvaraNa saMvAda -2)

ಅಭಿಜ್ಞಾನ ಮತ್ತು ಗೋಖಲೆ ಸಾರ್ವಜನಿಕ ಶಿಕ್ಷಣ ಸಂಸ್ಥೆ ಮಾರ್ಚ್ ೧೮ರಂದು ಏರ್ಪಡಿಸಿದ್ದ 'ಆವರಣ ಸಂವಾದ'ದ ಚಿಕ್ಕ ವರದಿ.


ಉತ್ತಮ ಪ್ರಾರ್ಥನೆಯ ನಂತರ, ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ, ದೇಶ ಕುಲಕರ್ಣಿ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಸುಧಾ ಮೂರ್ತಿ, ರಘು, ಜಿ.ಬಿ. ಹರೀಶ ಆವರಣದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹೇಳಿದರು.


ನಂತರ ಭೈರಪ್ಪನವರೊಡನೆ ಸಂವಾದವಿತ್ತು. ಸುಮಾರು ಪ್ರಶ್ನೆಗಳಿಗೆ ಭೈರಪ್ಪನವರು ದೀರ್ಘವಾಗಿ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದರು.


ಕೆಲವು ಪ್ರಶ್ನೆಗಳು ಮಾರ್ಚ್ ೪ ರಂದು ನಡೆದ ಸಂವಾದದಲ್ಲೂ ಬಂದಿದ್ದವು. ಅದರ ಪೂರ್ತಿ ವರದಿ ಇಲ್ಲಿದೆ.

ಇಸ್ಲಾಂ ಮತಾಂಧತೆಗೆ ಕಮ್ಯುನಿಸಂ ಉತ್ತರವಾ?

ಅದೊಂದೇ ಉತ್ತರ ಅಲ್ಲ - ಚೀನಾದ ಗಡಿಪ್ರದೇಶಗಳಲ್ಲಿ ಶರಿಯಾ ಕಾನೂನಿಗಾಗಿ ಒತ್ತಾಯಿಸುತ್ತಿರುವವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಪ್ರಜಾಪ್ರಭುತ್ವದ ಅಮೆರಿಕ, ಇಂಗ್ಲೆಂಡ್ ಗಳೂ ಕೂಡ ಸಮಸ್ಯೆಯನ್ನು ಎದುರಿಸಿವೆ.

ಭೈರಪ್ಪನವರಿಂದ ಇನ್ನೊಂದು ಶ್ರೇಷ್ಠ ಕಾದಂಬರಿ ಬರಲಿದೆಯೇ?

ನನಗೂ ಆಸೆ! ಆದರೆ ಆವರಣ ಬಿಡ್ತಾ ಇಲ್ಲ. ವಿಮರ್ಶೆ, ಚರ್ಚೆಗೆ ನನ್ನನ್ನು ಕರೆದರೆ ಅದರಿಂದ ಈಚೆ ಬರೋಕ್ ಸಾಧ್ಯ ಇಲ್ಲ! ಹೊಸ ಕಾದಂಬರಿ ಬರೆಯುವಾಗ ಹಿಂದಿನ ಕಾದಂಬರಿ ಪೂರ್ಣ ಮರೆತು ಹೊಸ ತಯಾರಿ ನಡೆಸಬೇಕು. ಇಲ್ಲದಿದ್ರೆ ನನಗೆ ಸಮಾಧಾನ ಇರಲ್ಲ.

ಆವರಣ ಬರೆದ ಹಿನ್ನೆಲೆಯೇನು? ಇಲ್ಲಿನ ಪಾತ್ರಗಳು ನಿಜಜೀವನದ ವ್ಯಕ್ತಿಗಳೇ?..


೨೫ ವರ್ಷದ ಹಿಂದೆ 'ನಾನೇಕೆ ಬರೆಯುತ್ತೇನೆ'ಯಲ್ಲಿ ಎಲ್ಲ ಹೇಳಿದ್ದೀನಿ. ಮಂದ್ರದಲ್ಲಿ ಬರುವುದು 'ಸತ್ಯ ಮತ್ತು ಸೌಂದರ್ಯ'ವೇ. ಆದರೆ ನನ್ನ ಸಂಶೋಧನಾ ಲೇಖನವನ್ನು ಎಷ್ಟು ಜನ ಓದಿದಾರೆ? ನನ್ನ ಆಸಕ್ತಿ ಮತ್ತು ಬಲವೆಂದರೆ ಸಾಹಿತ್ಯ. 'ಮಂದ್ರ' ಬರೆದಾಗ ಕೆಲವರು ಯಾವ ಸಂಗೀತಗಾರನನ್ನು ಮೋಹನ್ ಲಾಲ್ ಪಾತ್ರ ಹೋಲುತ್ತದೆ ಎಂದೆಲ್ಲ ಹೇಳಲು ಶುರು ಮಾಡಿದ್ರು. ನನಗಿರುವ ಸಂಗೀತಗಾರರ ಜೊತೆಗಿನ ಒಡನಾಟ, ೪೦ ವರ್ಷಗಳ ಸಂಗೀತದ ಆಸಕ್ತಿ (ಕಲಿಯುವ ಯತ್ನ, ಹುಬ್ಬಳ್ಳಿ, ಮೈಸೂರು, ಅಹಮದಾಬಾದ್, ಮುಂಬೈ, ದೆಹಲಿ ಗಳಲ್ಲಿ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದುದು). ಅದೇ ರೀತಿ ಗೃಹಭಂಗದ ಪಾತ್ರಗಳ ಬಗೆಗೂ ಸಾಕಷ್ಟು ಚರ್ಚೆಯಾಯಿತು. ಆವರಣದ ನರಸಿಂಹೇಗೌಡರ ಪಾತ್ರದ ಬಗ್ಗೆ ಕೇಳಿದ್ರಿ - ಇದು ಕಾಲ್ಪನಿಕ. ಇತಿಹಾಸದ ಔರಂಗಜೇಬ್, ಟಿಪ್ಪು ಮುಂತಾದವು ನಿಜ ಪಾತ್ರಗಳು. ಮಿಕ್ಕೆಲ್ಲವೂ ನನ್ನ ಸೃಷ್ಟಿ.

'ಪ್ರವೇಶ'ದಲ್ಲಿ ಹೇಳಿರುವ ಸೋದರಿ ಲೇಖಕಿ, ಅವರ ಕುಟುಂಬ ಯಾರು?

ಸದ್ಯಕ್ಕೆ ಹೇಳಲ್ಲ. ಇಂಗ್ಲಿಷ್, ಹಿಂದಿಗೆ ಪುಸ್ತಕ ಅನುವಾದಗೊಳ್ಳುತ್ತಿದೆ. ನಂತರ ಸೂಕ್ತ ಸಮಯದಲ್ಲಿ ನಿಮಗೆ ತಿಳಿಯುತ್ತೆ!


ಮಾನವತಾವಾದವೇ ಉತ್ತರವಲ್ಲವೇ?

ಮಾನವತಾವಾದ ಎಂದರೇನು ? ಪಾಶ್ಚಾತ್ಯ ದೇಶಗಳ ಮಾನವತಾವಾದ ಬಹಳ ಸೀಮಿತ ಅರ್ಥವಿರುವದ್ದು. ಪ್ರಕೃತಿ ಸಂಪತ್ತು ಇರುವುದು
ಮನುಷ್ಯನ ಭೋಗಕ್ಕಾಗಿ ಮಾತ್ರ.
ಹಿಂದು, ಜೈನ, ಬೌದ್ಧ ಧರ್ಮಗಳಲ್ಲಿ ಹೇಳುವುದು ಎಲ್ಲದರಲ್ಲಿ ದೈವತ್ವವನ್ನು ಕಾಣುವುದು. (ಸೂ: ಈ ಪ್ರಶ್ನೆಗೆ ತುಂಬಾ ದೀರ್ಘವಾದ ಉತ್ತರ ಕೊಟ್ಟರು. ಅವರು ಹೇಳಿದ ontology, episthomology, metaphysical ಇತ್ಯಾದಿ, ಚೆನ್ನಾಗಿತ್ತು - ಆದರೆ ನೆನಪಿಗೆ ಬರ್ತಿಲ್ಲ ;-) ).ಗಾಂಧಿವಾದ

ಬ್ರಿಟಿಷರ ಮೇಲಿನ ಕೋಪಕ್ಕಾಗಿ ಮೋಪ್ಲಾ ದಂಗೆಯಲ್ಲಿ ಮುಸ್ಲಿಮರು ಕೊಂದಿದ್ದು ಹಿಂದೂಗಳನ್ನು! ಖಿಲಾಫತ್ ಚಳವಳಿಯ ಅವಶ್ಯಕತೆ ಏನಿತ್ತು, appeasement ಆಗಿಂದಲೇ ಶುರು ಆಯ್ತು. ಮುಸ್ಲಿಮರ ಜೊತೆ ಹೋಗದಿದ್ದರೆ ಸ್ವಾತಂತ್ರ್ಯ ಹೋರಾಟ ಕಷ್ಟ ಎಂದುಕೊಂಡು ಗಾಂಧಿ ಟರ್ಕಿ ವಿಷಯದಲ್ಲಿ ಖಿಲಾಫತ್ ಚಳವಳಿಗೆ ಭಾರತದ ಬೆಂಬಲ ಸೂಚಿಸಿದರು. ಗಾಂಧೀಜಿಯವರು ಸುಳ್ಳಾಡಿದರು ಅಂತಲ್ಲ ಆದರೆ politically correct ಆಗಿರೋಕ್ಕೆ ಯತ್ನಿಸಿದರು.

ಚರ್ಚಿಲ್ ವಿಶ್ವ ಸಮರ ೨ ರ ಹೀರೊ, ಆದ್ರೆ ಅದರ ನಂತರದ ಚರ್ಚಿಲ್ ಮೇಲೆ ಗೌರವವಿದ್ದರೂ ಚುನಾವಣೆಯಲ್ಲಿ ಇಂಗ್ಲೆಂಡ್ ಜನತೆ ಅವನನ್ನು ಸೋಲಿಸಿದರು. ಏಕೆಂದರೆ ಈ ಯುದ್ಧದ ಹೀರೊ ಶಾಂತಿಯ ಸಮಯದಲ್ಲಿ ಇಂಗ್ಲೆಂಡ್ ಗೆ ಮಾಡಿದ ಕೆಲಸ ಕಡಿಮೆ. ನಮ್ಮಲ್ಲಿ ಹಾಗೆ ಎಲ್ಲಿ ಆಗತ್ತೆ? - ಒಬ್ಬ ಏನೋ ಒಂದು ಕೆಲ್ಸ ಮಾಡಿದ್ರೆ ಅವನೇ ಸರ್ವಸ್ವ ಎನ್ನೋ ಜನ ನಾವು!

ನಮ್ಮಲ್ಲಿ immature intellectuals ಜಾಸ್ತಿಯಾಗಿದ್ದಾರೆ!

ಐಟಿ-ಬಿಟಿ ಯ ಬಗ್ಗೆ ನಿಮ್ಮ ಅಭಿಪ್ರಾಯ.

ಇದರ ಅವಶ್ಯಕತೆಯಿದೆ. ಇಂದು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಕಂಪ್ಯೂಟರ್ ಜ್ಞಾನ ಇರಬೇಕು. ಕಲಿಯೋದಿಲ್ಲ ಅಂದ್ರೆ ಹಿಂದೆ ಉಳೀತೀವಿ. ಹೊಸದನ್ನು ಕಲಿತು ನಮ್ಮತನವನ್ನು ಉಳಿಸಿಕೊಂಡುಹೋಗುವುದೇ ಬುದ್ಧಿವಂತಿಕೆ.

ಕನ್ನಡ ಸಾಹಿತ್ಯಕ್ಕೆ ಸಂಸ್ಕೃತದ ಅವಶ್ಯಕತೆಯಿದೆಯೇ?


elementary ಸಂಸ್ಕೃತ ಗೊತ್ತಿಲ್ಲದೆ ಇದ್ರೆ ಏನೂ ಬರೆಯೋಕೆ ಸಾಧ್ಯವಿಲ್ಲ. ಇಂದಿನ ಅನೇಕ ಕನ್ನಡ ಅಧ್ಯಾಪಕರಿಗೆ ಸರಳ ವ್ಯಾಕರಣ (ಸಂಧಿ, ಸಮಾಸ, ಅಲ್ಪಪ್ರಾಣ, ಮಹಾಪ್ರಾಣ) ವೂ ಗೊತ್ತಿಲ್ಲ. ಭಾರತೀಯ ಕಾವ್ಯ, ಸಾಹಿತ್ಯ ಓದಲು ಸಂಸ್ಕೃತದ ಜ್ಞಾನ ಬೇಕು.

Thursday, March 15, 2007

ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ 'ಮಂದ್ರ' ನಾಟಕ

ಕಲಾಗಂಗೋತ್ರಿಯವರು ಯುಗಾದಿಯ ಪ್ರಯುಕ್ತ ಏರ್ಪಡಿಸಿದ್ದ 'ಬೇವು-ಬೆಲ್ಲ' ನಾಟಕೋತ್ಸವದ ಕಡೆಯ ನಾಟಕ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಮಂದ್ರ ಆಧಾರಿತ ನಾಟಕ 'ಮಂದ್ರ'.

ಕಾದಂಬರಿ ಓದಿದ್ದವರಿಗೆ ಮೋಹನ್ ಲಾಲನ ಪಾತ್ರ ಚೆನ್ನಾಗಿ ತಿಳಿದಿರುತ್ತೆ. ಕಲೆ ಮತ್ತ ಕಲಾವಿದನ ಜೀವನವನ್ನು ಬೇರೆ ಮಾಡಿ ನೋಡಬೇಕೆಂಬುದೇ ಇದರ ಸಾರಾಂಶ. ಯಾವುದೇ ಕಲಾವಿದ ಕಾಲಕಳೆದಂತೆ ತನ್ನನ್ನು ಅವಲೋಕಿಸಿಕೊಂಡು, ಪೂರಕ ಸಾಹಿತ್ಯಗಳ ಅಧ್ಯಯನ ಮಾಡೋದು, ಏಕತಾನತೆಯನ್ನು ದೂರ ಮಾಡೋದು ಅವಶ್ಯ. ಇಲ್ಲದಿದ್ರೆ ಕಾದಂಬರಿಯ ಗೋರೆ ಹೇಳುವಂತೆ ಕಲೆ 'ತಾಂತ್ರಿಕವಾಗಿ ಚೆನ್ನಾಗಿರುತ್ತೆ ಆದ್ರೆ ಅದು ಯಾಂತ್ರಿಕವಾಗಿಬಿಡುತ್ತೆ'.

ಮೋಹನ್ ಲಾಲ್ ನ ಜೀವನದಲ್ಲಿ ಸಂಗೀತ ಕಲಿಯುವಾಗ, ಮದುವೆಯಿಂದ, ಮುಂಬೈ ಸಂಗೀತ ಪಾಠಗಳ ಮೂಲಕ, ನೃತ್ಯ ಕಲಾವಿದೆಯ ಮೂಲಕ ಇತ್ಯಾದಿ ಅನೇಕ ಹೆಣ್ಣುಗಳ ಪ್ರವೇಶವಾಗುತ್ತದೆ. ಹೆಣ್ಣಿನ ವಿಷಯದಲ್ಲಿ ಅವನ ದುರ್ಬಲತೆ (?) ಯೇ ಅವನ ಜೀವನದ ಆರೋಹಣ-ಅವರೋಹಣಕ್ಕೆ ಕಾರಣಗಳು.

ಸಂಗೀತಗಾರನ (ಹಿಂದೂಸ್ಥಾನಿ) ಕಥೆಯಾದ್ದರಿಂದ ಸಂಗೀತ ಅಲ್ಲಲ್ಲಿ ಮೂಡಿಬಂದಿದೆ. ಹಿನ್ನೆಲೆ ಸಂಗೀತ ಉತ್ತಮವಾಗಿಲ್ಲದಿದ್ದರೂ ಸಮಾಧಾನಕರವಾಗಿದೆ. ಧ್ವನಿ ಮತ್ತು ಬೆಳಕಿನ ಇನ್ನಷ್ಟು ಸುಧಾರಿಸಬೇಕಿತ್ತು. ಪ್ರಾಯಶ: ರವೀಂದ್ರ ಕಲಾಕ್ಷೇತ್ರಕ್ಕೆ ಒಂದು upgrade ಬೇಕಿದೆ!

ಸಂಗೀತಾಭಿಮಾನದಿಂದ ಬಂದೋರಿಗೆ ಇನ್ನಷ್ಟು ಸಂಗೀತ ಇರಬೇಕಿತ್ತು ಎನಿಸುತ್ತದೆ ಆದರೆ ನಾಟಕ, ಸಾಹಿತ್ಯ ಪ್ರಿಯರಿಗೆ ಬೇಜಾರಿನಿಸುವಷ್ಟು ಜಾಸ್ತಿ ಏನಿಲ್ಲ.

ಎಲ್ಲರ ನಟನೆ ಸಮಾಧಾನಕರವಾಗಿದೆ. ನಾಟಕದ ಪ್ರಾರಂಭದ ಮೊದಲೇ ಆಯೋಜಕರು 'ಇದೊಂದು ಪ್ರಯೋಗ' ಎಂಬ ಹಣೆಪಟ್ಟಿ ಕಟ್ಟಿದರು. ಮಂದ್ರ ಬಹು ದೊಡ್ಡ ಕಾದಂಬರಿ. ಸುಮಾರು ೬೦೦ ಪುಟಗಳನ್ನು ೧-೧:೩೦ ಘಂಟೆಗೆ ಆಗುವಷ್ಟು ಸಾಹಿತ್ಯ ಬರೆದು ನಾಟಕ ಮಾಡೋದು ಕಷ್ಟ. ಇಷ್ಟಿದ್ರೂ ಉತ್ತಮ ಸಂಕಲನ (editing) ಮೂಲಕ ಇದನ್ನು ೧:೩೦ ಘಂಟೆಗೆ ಇಳಿಸಿದ್ರೆ ಚೆನ್ನಾಗಿರ್ತಿತ್ತು. ಉದಾ: ವಿದೇಶಿ ಮಹಿಳೆಯ ದೃಶ್ಯವನ್ನು ಕೈ ಬಿಡಬಹುದಿತ್ತು. ಯಾಕಂದ್ರೆ, ಆ ಹೊತ್ತಿಗಾಗ್ಲೇ ಮೋಹನ್ ಲಾಲ್ ನ ಪ್ರೇಮದ ಆರೋಹಣ-ಅವರೋಹಣಗಳು ಪ್ರೇಕ್ಷಕರಿಗೆ ಮನದಟ್ಟಾಗಿರುತ್ತೆ, ಹೊಸ ವಿಷಯವನ್ನೇನೂ ನೀಡುಲ್ಲ.

ಈ ನಾಟಕ ನೋಡಲು, ಸಾಹಿತ್ಯಾಭಿಮಾನಿಯಾಗಿ, ನಾಟಕ ಪ್ರಿಯನಾಗಿ, ಸಂಗೀತಪ್ರಿಯನಾಗಿ -ಹೀಗೆ ಯಾವುದೇ ಅಭಿಮಾನದಿಂದ ಹೋದರೂ, ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ.

ಬಾಲಂಗೋಚಿ:
ಇತ್ತೀಚೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸೆಲ್-ಫೋನ್ ಕಾಟ ಜಾಸ್ತಿಯಾಗಿದೆ. ವಿದ್ಯಾವಂತ ಅಸಂಸ್ಕೃತರು ಜಾಸ್ತಿ ಆಗಿದ್ದಾರೆ. ಕನಿಷ್ಟ ಪಕ್ಷ, ಕಷ್ಟ ಪಟ್ಟು ತಯಾರಿ ನಡೆಸಿರುವ ಕಲಾವಿದರಿಗ ಗೌರವ, ಸಹ-ಪ್ರೇಕ್ಷಕರ ಮೇಲೆ ಅನುಕಂಪವೂ ಇಲ್ಲ. ಪುಟ್ಟ ಮಕ್ಕಳನ್ನು ಕರೆತರಬಾರದೆಂಬ ಅರಿವೂ ಇಲ್ಲ. ಸಂಘಟಕರು ಇವುಗಳ ಬಗ್ಗೆ ಕಟ್ಟುನಿಟ್ಟಾದ ಸೂಚನೆ ನೀಡಿದರೆ ೫೦% ಸಮಸ್ಯೆ ಕಡಿಮೆ ಆಗಬಹುದು!

Tuesday, March 13, 2007

ಪ್ರೇಮ ಕವಿಯ ದುರಂತ ಕಥೆ

ಕಲಾಗಂಗೋತ್ರಿ ತಂಡ ಕವಿ ಕೆ.ಎಸ್. ನರಸಿಂಹಸ್ವಾಮಿ ಜೀವನಾಧಾರಿತ ಕಥೆಯನ್ನು 'ಮೈಸೂರು ಮಲ್ಲಿಗೆ' ನಾಟಕ ರೂಪಕ್ಕೆ ತಂದಿದ್ದಾರೆ. ಮಾರ್ಚ್ ೧೩ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕದ ಪ್ರದರ್ಶನವಿತ್ತು.

ಇಲ್ಲಿ ಬಳೆಗಾರ ಚೆನ್ನಯ್ಯನ ಪಾತ್ರದ ಮೂಲಕ ಹೊಸ ಪೀಳಿಗೆಗೆ ಮಲ್ಲಿಗೆ ಕವಿಯ ಕಥೆ ಹೇಳಿಸಿರುವುದು. ಬಳೆಗಾರ ಚೆನ್ನಯ್ಯ ಎರಡು ಪೀಳಿಗೆಯ ಕೊಂಡಿಯಾಗುವ ಪಾತ್ರ. ನಾಟಕದ ಮೊದಲ ಭಾಗ ಕವಿಯ ಯೌವನ, ಕವಿತಾ ರಚನೆ, ಮದುವೆ ಮುಂತಾದವುಗಳನ್ನು ಪರಿಚಯಿಸುತ್ತದೆ. ಬಳೆಗಾರ ಚೆನ್ನಯ್ಯ ಬಾಗಿಲಿಗೆ, ತೌರಸುಖದೊಳಗೆನ್ನ, ಸಿರಿಗೆರೆಯ ನೀರಿನಲಿ, ರಾಯರು ಬಂದರು, ನಿನ್ನ ಪ್ರೇಮದ ಪರಿಯ ಮುಂತಾದ ನರಸಿಂಹ ಸ್ವಾಮಿಯವರ ಕವನಗಳನ್ನು ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಿ ಈ ಭಾಗದ ಕಥೆಯನ್ನು ಹೆಣೆದಿದ್ದಾರೆ.

ಈ ಕಥೆಯನ್ನು ಪರಿಚಯಿಸುವಾಗ ಇಂದಿನ ಸಮಾಜದ ಚಿತ್ರಣವನ್ನೂ ನಾಟಕಕಾರರು ಸೂಕ್ಷ್ಮವಾಗಿ ಮಾಡಿಸಿದ್ದಾರೆ. ಬಳೆಗಾರ ನೀರನ್ನು ಕೇಳಿದಾಗ ಈ ಪೀಳಿಗೆಯ ಪುಟ್ಟಿ ಪೆಪ್ಸಿ ತಂದುಕೊಡುವುದು, ಮರಗಳನ್ನು ಕಡಿಯುವುದು, ಉತ್ತಮ ಕವಿತೆಗಳನ್ನು ಇಂದಿನ ಚಲನಚಿತ್ರಗಳಲ್ಲಿ ಉಪಯೋಗಿಸಿರುವುದು (ಉದಾಹರಣೆಗೆ, ನವಿಲೂರಿಗೆ ೫೦ ವರ್ಷದ ನಂತರ ಬಳೆಗಾರ ಬಂದಾಗ ಅವನ ಮುಂದೆ 'ಭಾಗ್ಯದ ಬಳೆಗಾರ'ದ ಇತ್ತೀಚಿನ ಕಳಪೆ remix version ಹಾಡಿಕೊಂಡು ಹೋಗುವುದು!)..

ಎರಡನೇ ಭಾಗದಲ್ಲಿರುವುದು ಅವರು ಜೀವನದಲ್ಲಿ ಎದುರಿಸಿದ ಸಾಂಸಾರಿಕ, ಆರ್ಥಿಕ ಕಷ್ಟಗಳ ಕಥೆ. ಮಗಳ ದುರಂತ ಕಥೆ, ಮಕ್ಕಳ ಜೊತೆಯಿರದೇ ಗಂಡ-ಹೆಂಡತಿ ಇಬ್ಬರೇ ಜೀವನ ನಡೆಸುತ್ತಿರುವಾಗ ಮಗ ಬಂದು ನಮ್ಮೊಟ್ಟಿಗಿರಿ ಎಂದಾಗ ನಡೆಯುವ ಸಂಭಾಷಣೆ ನಿಜಕ್ಕೂ ಮನ ಕಲಕುತ್ತದೆ. ಮಗನ ಮೇಲಿನ ಕೋಪವನ್ನು 'ಯಾತ್ರೆ' ಕವಿತೆಯ ಮೂಲಕ ತೀರಿಸಿಕೊಂಡು, ಆ ಕವಿತೆಯನ್ನು ಮಗ ತನ್ನ ಸ್ನೇಹಿತನ ಮೂಲಕ ತಿಳಿಯುವುದು, ಆಗ ಕವಿ ಇರಬಹುದು, ಆದರ ಮೊಮ್ಮಗನ ಮೇಲಂತೂ ಪ್ರೀತಿಯಿಂದ 'ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು..' ಬರೆದಿರುವುದನ್ನು ಮಗನಿಗೆ ಹೇಳುವ ಭಾವುಕ ಸನ್ನಿವೇಶ ಇವುಗಳಿಂದ ಕೂಡಿವೆ.

ಕೆಲಸದಲ್ಲಿನ ಪ್ರಾಮಾಣಿಕತೆಯಿಂದ, ತಮಗಾಗಿ ಒಂದು ಸ್ವಂತ ಮನೆ ಮಾಡಿಕೊಳ್ಳಲಾಗದೇ ಊರಿಂದೂರಿಗೆ ವರ್ಗವಾಗುವಾಗ, ಬಳೆಗಾರ ಕೇಳುವ ಪ್ರಶ್ನೆಗೆ ಅವರು ಹೇಳೋದು 'ಇರೂರಿಗೆ ಒಂದೇ ಮನೆ, ಇರದವರಿಗೆ ನೂರಾರು'. ಹುಬ್ಬಳ್ಳಿಯ ಭಿಕ್ಷುಕ ಇವರ ಹಾಡು ಹೇಳಿ ದಿನಾಲೂ ೫ ರೂ ಸಂಪಾದಿಸುವಾಗ ತಿಂಗಳ ಖರ್ಚಿನ ಲೆಕ್ಕ ತೂಗುವಾಗ ೧-೨ ರೂ ಗೆ ಲೆಕ್ಕ ಹಾಕುವುದು, ೨೫-೫೦ ರೂ ಸಾಲಕ್ಕೆ ಪರದಾಡುವ ಸನ್ನಿವೇಶ..ಇತ್ಯಾದಿ.

ಕಡೆಯ ಭಾಗ ಕವಿ-ಪತ್ನಿಯ ಸಂಭಾಷಣೆ. ಹೆಂಡತಿಯೇ ಅವರ ಜೀವನಕ್ಕೆ ಸ್ಫೂರ್ತಿ. ಆಕೆ ಅವರ ಕವಿತೆಗಳ ವಿಮರ್ಶಕಿಯೂ ಹೌದು ' ನೀವು ಪ್ರೀತಿಯಿಂದ ಬರೆದಿರಿ, ಸುಖದಿಂದ ಬರೆದಿರಿ, ಕಷ್ಟ-ನಷ್ಟದಿಂದ ಬರೆದಿರಿ, ಆದರೆ ನೆಮ್ಮದಿಯಿಂದ ಬರೆಯಲಿಲ್ಲ!' ಎನ್ನುತ್ತಾರೆ ಅವರ ಹೆಂಡತಿ. ನೆಮ್ಮದಿಯಿದ್ದಾಗ ಕವಿತೆ ಬರೆಯಕ್ಕಾಗುಲ್ಲ ಎನ್ನುತ್ತಾರೆ ಕವಿ ಆಗ! 'ಮೊದಲ ದಿನ ಮೌನ', 'ಅಕ್ಕಿ ಆರಿಸುವಾಗ', ದೀಪವು ನಿನ್ನದೇ' ಕವಿತೆಗಳು ಇವರಿಬ್ಬರ ನಡುವಿನ ಸಂವಾದಕ್ಕೆ sentimental touch ಕೊಡುತ್ತದೆ. ಇವರ ದಾಂಪತ್ಯ ಚಿರಂತನ ಪ್ರೇಮದ ಸಂಕೇತ. ನಾಟಕ ಅಂತ್ಯವೂ ಅದನ್ನೇ ಸೂಚಿಸುತ್ತದೆ.

ಕಡೆಯಲ್ಲಿ ಬಳೆಗಾರ ಚೆನ್ನಯ್ಯ, ಪುಟ್ಟಿಯ ಮೂಲಕ ಮಲ್ಲಿಗೆ ಗಿಡ ನೆಡೆಸಿ ನೀರೆರಿಸಿ, 'ಹೀಗೆ ಮಲ್ಲಿಗೆಯ, ಮಲ್ಲಿಗೆ ಕವಿ ಹರಡಿದ ಕಂಪು ನೂರಾರು ವರ್ಷ ಉಳಿಯಲಿ, ಬೆಳೆಯಲಿ' ಎಂಬ ಸಂದೇಶ ಹೇಳುವ ಮೂಲಕ ಉತ್ತಮ ಗುಣಮಟ್ಟದ ಈ ನಾಟಕ ಸುಂದರವಾಗಿ ಅಂತ್ಯಗೊಳ್ಳುತ್ತದೆ.

ರಾಜೇಂದ್ರ ಕಾರಂತ್ ಈ ನಾಟಕದ ಸಾಹಿತ್ಯ ಬರೆದಿದ್ದಾರೆ. ಸಂಭಾಷಣೆಗಳಂತೂ ಅತ್ಯದ್ಭುತ. ಅವರು ಚೆನ್ನಯ್ಯನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಡಾ|| ಬಿ. ವಿ. ರಾಜಾರಾಮ್ ಈ ನಾಟಕದ ನಿರ್ದೇಶಕರು- ನಾಟಕದ ಯಾವುದೇ ದೃಶ್ಯವೂ ಅನವಶ್ಯಕವೆನಿಸುವುದಿಲ್ಲ. ಆ ಮಟ್ಟಿಗೆ ಸಂಭಾಷಣೆ, ದೃಶ್ಯಗಳ ಹಿಡಿತದೊಂದಿಗೆ ಉತ್ತಮವಾಗಿ ನಿರ್ದೇಶಿಸಿದ್ದಾರೆ. ಜೊತೆಗೆ ನರಸಿಂಹಸ್ವಾಮಿಯವರ ವೃದ್ಧಾಪ್ಯದ ಪಾತ್ರವನ್ನು top-class ಆಗಿ ಮಾಡಿದ್ದಾರೆ. ಮಿಕ್ಕಂತೆ ಕವಿಯ ಹೆಂಡತಿ (ವಿದ್ಯಾ) , ಕವಿಯ ಯೌವನದ ಪಾತ್ರಧಾರಿ (ಪ್ರದೀಪ್) , ನಡುಜೀವನದ ಪಾತ್ರಧಾರಿ (ಶಂಕರ್ ನಾರಾಯಣ್) ಅವರ ನಟನೆ ಕೂಡ ಚೆನ್ನಾಗಿದೆ.

ವಿನಯ್ ಕುಮಾರ್, ಪ್ರತಿಮಾ ಅವರ ಅತ್ಯುತ್ತಮ ಹಿನ್ನೆಲೆ ಗಾಯನ ಕೂಡ ಈ ನಾಟಕದ ಮತ್ತೊಂದು ಪ್ರಮುಖ ಆಕರ್ಷಣೆ. ವೇಷ, ಅಲಂಕಾರ ಕೂಡ ಒಳ್ಳೆಯದಿತ್ತು - ವಿಶೇಷವಾಗಿ ಬಳೆಗಾರನ ಮತ್ತು ಕವಿಯ ವೃದ್ಧಾಪ್ಯದ ಪಾತ್ರದ ಅಲಂಕಾರ. ಧ್ವನಿವರ್ಧಕ, ಬೆಳಕಿನ ವ್ಯವಸ್ಥೆಯ ಗುಣಮಟ್ಟ ಇನ್ನಷ್ಟು ಚೆನ್ನಾಗಿರಬಹುದಿತ್ತು.

ಟಿ. ಎನ್. ಸೀತಾರಾಮ್ ಅವರು ಒಮ್ಮೆ ಹೇಳಿದ್ದು 'ನಮ್ಮ ಮುಂದಿನ ಪೀಳಿಗೆಗೆ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಅಡಿಗ ಇವರ ಕಾವ್ಯವನ್ನು ಏಕೆ ಓದಬೇಕು ಎಂದು ತಿಳಿಸಬೇಕು.' ಈ ನಾಟಕ ನೋಡಿದರೆ ನಮ್ಮ ನಾಡಿನದೇ ಆದ ಭಾವುಕತೆ ಇರುವ, ಹೃದಯಕ್ಕೆ ಹತ್ತಿರವಾಗುವ ಕಾವ್ಯದ ಪರಿಚಯ ಈ ನಾಟಕ ಮಾಡಿಕೊಡುತ್ತದೆ.

'ಮೈಸೂರು ಮಲ್ಲಿಗೆ' ಒಂದು ಉತ್ತಮ ನಾಟಕ. ೨೦೦೭, ಮಾರ್ಚ್ ೨೪ ಮತ್ತು ೨೫ ರಂದು ರಂದು 'ರಂಗ ಶಂಕರ' ದಲ್ಲಿ ಮತ್ತು ೩೦ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕದ ಪ್ರದರ್ಶನವಿದೆ.

ನಾನಂತೂ ಮಾರ್ಚ್ ೨೪ಕ್ಕೆ ಕಾಯುತ್ತಿರುವೆ!!

Sunday, March 11, 2007

ಮರಳಿ ಜನಪದಕ್ಕೆ

ಇತ್ತೀಚೆಗೆ ಜನಪದ ಕವಿ ಚಂದ್ರಶೇಖರ ಕಂಬಾರರು ಒಂದು ಸಂದರ್ಶನದಲ್ಲಿ ಹೇಳಿದ ಮಾತು 'ನನ್ನ ತಾಯಿ ಮತ್ತು ಅಜ್ಜಿಯರಿಗೆ ತಿಳಿದಿದ್ದ ಪ್ರತಿಶತ ೧೦ರಷ್ಟು ಜನಪದ ಸಾಹಿತ್ಯ ನನಗೆ ಗೊತ್ತಿಲ್ಲ!' ಕಂಬಾರರು ಶ್ರೇಷ್ಠ ಜನಪದ ಕವಿ. ಅವರು ಈ ಮಾತು ಹೇಳಬೇಕಿದ್ದರೆ ಒಂದು ಕಾಲದಲ್ಲಿ ಈ ನಾಡಿನ ಜನಪದ ಕಲೆ, ಸಂಸ್ಕೃತಿ ಎಷ್ಟು ಚಂದ ಇತ್ತು!


'ಜಾನಪದ ಜಾತ್ರೆ' ಸುವರ್ಣ ಕರ್ನಾಟಕದ ಅರ್ಥಪೂರ್ಣ ಆಚರಣೆಯತ್ತ ಸರ್ಕಾರ ಆಯೋಜಿಸಿರುವ ಉತ್ತಮ ಕಾರ್ಯಕ್ರಮಗಳಲ್ಲೊಂದು. ಜಾನಪದ ಕಲೆಗಳು ಶೀಘ್ರವಾಗಿ ಮರೆಯಾಗುತ್ತಿರುವ ಈ ಕಾಲದಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದಕ್ಕೆ ಸ್ವತ: ಪ್ರೋತ್ಸಾಹ ನೀಡಿ ವಿಶೇಷ ಹಣ ಬಿಡುಗಡೆ ಮಾಡಿರುವುದು ಸಂತಸ ತರುವ ಸಂಗತಿ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ, ಅವರಿಗೊಂದು ವೇದಿಕೆ ಸಿಕ್ಕಿರುವುದು, ಸ್ವಲ್ಪ ಮಟ್ಟಿನ ಆರ್ಥಿಕ ಸಹಾಯ ದೊರೆತಿರುವುದು ಜಾನಪದ ಕಲೆ ಮತ್ತು ಸಾಹಿತ್ಯದ ಪುನರುತ್ಥಾನಕ್ಕೆ ಸರಿಯಾದ ದಿಕ್ಕು ಸಿಕ್ಕಿದೆಯೆನಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ, ಕೊಡಗಿನ ಒಂದು ಜನಪದ ಕಲೆ ವಿನಾಶದಂಚಿನಿಂದ ಮೇಲೆದ್ದಿದೆ.

ಬೆಂಗಳೂರಿನ ಲಾಲ್ ಬಾಗ್ ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಸಂಜೆ ೬ ರಿಂದ ೮:೩೦ ವರೆಗೆ ಕಾರ್ಯಕ್ರಮವಿರುತ್ತದೆ. ರಾಜ್ಯದ ಬೇರೆ ಜಿಲ್ಲೆಗಳಿಗೂ ಈ ಕಾರ್ಯಕ್ರಮವನ್ನು ಒಯ್ಯುವ ಯೋಜನೆಯಿದೆ.

ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಜನ ಸೇರುವುದೇ ಇದರ ಬಗ್ಗೆ ಜನಗಳಲ್ಲಿರುವ ಆಸಕ್ತಿಗೆ ಸಾಕ್ಷಿ.


ವೀರಗಾಸೆ, ಗೀಗೀ ಪದ, ಸಣ್ಣಾಟ, ದೊಡ್ಡಾಟ, ಹೆಜ್ಜೆ ಮೇಳ, ಹಾಲಕ್ಕಿ ಸುಗ್ಗಿ ಕುಣಿತ, ಜಡೆ ಕೋಲಾಟ, ಲಂಬಾಣಿ ಕುಣಿತ, ಕರಡಿ ಮಜಲು, ಕಿನ್ನರಿ ಜೋಗಿ ಮೇಳ, ಜಾನಪದ ನೃತ್ಯ..ಇತ್ಯಾದಿ ಕರ್ನಾಟಕದ ಹಲವಾರು ಜನಪದ ಪ್ರಾಕಾರಗಳ ಪ್ರದರ್ಶನವಿರುತ್ತದೆ.


ಪ್ರತಿ ವಾರಾಂತ್ಯದ theme ಬೇರೆ ಇರುತ್ತದೆ. ಆದ್ದರಿಂದ ಒಮ್ಮೆ ಹೋಗಿದ್ದರೂ ಪ್ರತಿ ತಿಂಗಳೂ ಒಮ್ಮೆ ಹೋದರೆ, ನಿಮಗೆ ಮನೋರಂಜನೆ, ಸ್ಥಳೀಯ ಕಲೆಗೆ ಪ್ರೋತ್ಸಾಹ ದೊರೆಯುತ್ತದೆ.

Friday, March 9, 2007

ಸ್ವಾಗತ!

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ?
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ
ಗಟ್ಟಿತನ ಗರಡಿಫಲ ಮಂಕುತಿಮ್ಮ||

ಸಾಹಿತಿಯಾಗಬೇಕೆಂಬ ಆಸೆಯಿಲ್ಲದಿದ್ದರೂ, ಅಧ್ಯಯನ, ಸಂವಾದಗಳ ಹವ್ಯಾಸದಿಂದ ಅಲ್ಪಸ್ವಲ್ಪ ಬರೆಯಬೇಕಿನಿಸುತ್ತದೆ. ಆದ್ದರಿಂದ ಈ ಪ್ರಯತ್ನ!

ಈ ಬ್ಲಾಗ್ ನ ಚೌಕಟ್ಟು ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಸೀಮಿತ ( ಅಂತ ಅಂದ್ಕೊಂಡಿದೀನಿ!).