Thursday, March 15, 2007

ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ 'ಮಂದ್ರ' ನಾಟಕ

ಕಲಾಗಂಗೋತ್ರಿಯವರು ಯುಗಾದಿಯ ಪ್ರಯುಕ್ತ ಏರ್ಪಡಿಸಿದ್ದ 'ಬೇವು-ಬೆಲ್ಲ' ನಾಟಕೋತ್ಸವದ ಕಡೆಯ ನಾಟಕ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಮಂದ್ರ ಆಧಾರಿತ ನಾಟಕ 'ಮಂದ್ರ'.

ಕಾದಂಬರಿ ಓದಿದ್ದವರಿಗೆ ಮೋಹನ್ ಲಾಲನ ಪಾತ್ರ ಚೆನ್ನಾಗಿ ತಿಳಿದಿರುತ್ತೆ. ಕಲೆ ಮತ್ತ ಕಲಾವಿದನ ಜೀವನವನ್ನು ಬೇರೆ ಮಾಡಿ ನೋಡಬೇಕೆಂಬುದೇ ಇದರ ಸಾರಾಂಶ. ಯಾವುದೇ ಕಲಾವಿದ ಕಾಲಕಳೆದಂತೆ ತನ್ನನ್ನು ಅವಲೋಕಿಸಿಕೊಂಡು, ಪೂರಕ ಸಾಹಿತ್ಯಗಳ ಅಧ್ಯಯನ ಮಾಡೋದು, ಏಕತಾನತೆಯನ್ನು ದೂರ ಮಾಡೋದು ಅವಶ್ಯ. ಇಲ್ಲದಿದ್ರೆ ಕಾದಂಬರಿಯ ಗೋರೆ ಹೇಳುವಂತೆ ಕಲೆ 'ತಾಂತ್ರಿಕವಾಗಿ ಚೆನ್ನಾಗಿರುತ್ತೆ ಆದ್ರೆ ಅದು ಯಾಂತ್ರಿಕವಾಗಿಬಿಡುತ್ತೆ'.

ಮೋಹನ್ ಲಾಲ್ ನ ಜೀವನದಲ್ಲಿ ಸಂಗೀತ ಕಲಿಯುವಾಗ, ಮದುವೆಯಿಂದ, ಮುಂಬೈ ಸಂಗೀತ ಪಾಠಗಳ ಮೂಲಕ, ನೃತ್ಯ ಕಲಾವಿದೆಯ ಮೂಲಕ ಇತ್ಯಾದಿ ಅನೇಕ ಹೆಣ್ಣುಗಳ ಪ್ರವೇಶವಾಗುತ್ತದೆ. ಹೆಣ್ಣಿನ ವಿಷಯದಲ್ಲಿ ಅವನ ದುರ್ಬಲತೆ (?) ಯೇ ಅವನ ಜೀವನದ ಆರೋಹಣ-ಅವರೋಹಣಕ್ಕೆ ಕಾರಣಗಳು.

ಸಂಗೀತಗಾರನ (ಹಿಂದೂಸ್ಥಾನಿ) ಕಥೆಯಾದ್ದರಿಂದ ಸಂಗೀತ ಅಲ್ಲಲ್ಲಿ ಮೂಡಿಬಂದಿದೆ. ಹಿನ್ನೆಲೆ ಸಂಗೀತ ಉತ್ತಮವಾಗಿಲ್ಲದಿದ್ದರೂ ಸಮಾಧಾನಕರವಾಗಿದೆ. ಧ್ವನಿ ಮತ್ತು ಬೆಳಕಿನ ಇನ್ನಷ್ಟು ಸುಧಾರಿಸಬೇಕಿತ್ತು. ಪ್ರಾಯಶ: ರವೀಂದ್ರ ಕಲಾಕ್ಷೇತ್ರಕ್ಕೆ ಒಂದು upgrade ಬೇಕಿದೆ!

ಸಂಗೀತಾಭಿಮಾನದಿಂದ ಬಂದೋರಿಗೆ ಇನ್ನಷ್ಟು ಸಂಗೀತ ಇರಬೇಕಿತ್ತು ಎನಿಸುತ್ತದೆ ಆದರೆ ನಾಟಕ, ಸಾಹಿತ್ಯ ಪ್ರಿಯರಿಗೆ ಬೇಜಾರಿನಿಸುವಷ್ಟು ಜಾಸ್ತಿ ಏನಿಲ್ಲ.

ಎಲ್ಲರ ನಟನೆ ಸಮಾಧಾನಕರವಾಗಿದೆ. ನಾಟಕದ ಪ್ರಾರಂಭದ ಮೊದಲೇ ಆಯೋಜಕರು 'ಇದೊಂದು ಪ್ರಯೋಗ' ಎಂಬ ಹಣೆಪಟ್ಟಿ ಕಟ್ಟಿದರು. ಮಂದ್ರ ಬಹು ದೊಡ್ಡ ಕಾದಂಬರಿ. ಸುಮಾರು ೬೦೦ ಪುಟಗಳನ್ನು ೧-೧:೩೦ ಘಂಟೆಗೆ ಆಗುವಷ್ಟು ಸಾಹಿತ್ಯ ಬರೆದು ನಾಟಕ ಮಾಡೋದು ಕಷ್ಟ. ಇಷ್ಟಿದ್ರೂ ಉತ್ತಮ ಸಂಕಲನ (editing) ಮೂಲಕ ಇದನ್ನು ೧:೩೦ ಘಂಟೆಗೆ ಇಳಿಸಿದ್ರೆ ಚೆನ್ನಾಗಿರ್ತಿತ್ತು. ಉದಾ: ವಿದೇಶಿ ಮಹಿಳೆಯ ದೃಶ್ಯವನ್ನು ಕೈ ಬಿಡಬಹುದಿತ್ತು. ಯಾಕಂದ್ರೆ, ಆ ಹೊತ್ತಿಗಾಗ್ಲೇ ಮೋಹನ್ ಲಾಲ್ ನ ಪ್ರೇಮದ ಆರೋಹಣ-ಅವರೋಹಣಗಳು ಪ್ರೇಕ್ಷಕರಿಗೆ ಮನದಟ್ಟಾಗಿರುತ್ತೆ, ಹೊಸ ವಿಷಯವನ್ನೇನೂ ನೀಡುಲ್ಲ.

ಈ ನಾಟಕ ನೋಡಲು, ಸಾಹಿತ್ಯಾಭಿಮಾನಿಯಾಗಿ, ನಾಟಕ ಪ್ರಿಯನಾಗಿ, ಸಂಗೀತಪ್ರಿಯನಾಗಿ -ಹೀಗೆ ಯಾವುದೇ ಅಭಿಮಾನದಿಂದ ಹೋದರೂ, ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ.

ಬಾಲಂಗೋಚಿ:
ಇತ್ತೀಚೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸೆಲ್-ಫೋನ್ ಕಾಟ ಜಾಸ್ತಿಯಾಗಿದೆ. ವಿದ್ಯಾವಂತ ಅಸಂಸ್ಕೃತರು ಜಾಸ್ತಿ ಆಗಿದ್ದಾರೆ. ಕನಿಷ್ಟ ಪಕ್ಷ, ಕಷ್ಟ ಪಟ್ಟು ತಯಾರಿ ನಡೆಸಿರುವ ಕಲಾವಿದರಿಗ ಗೌರವ, ಸಹ-ಪ್ರೇಕ್ಷಕರ ಮೇಲೆ ಅನುಕಂಪವೂ ಇಲ್ಲ. ಪುಟ್ಟ ಮಕ್ಕಳನ್ನು ಕರೆತರಬಾರದೆಂಬ ಅರಿವೂ ಇಲ್ಲ. ಸಂಘಟಕರು ಇವುಗಳ ಬಗ್ಗೆ ಕಟ್ಟುನಿಟ್ಟಾದ ಸೂಚನೆ ನೀಡಿದರೆ ೫೦% ಸಮಸ್ಯೆ ಕಡಿಮೆ ಆಗಬಹುದು!

3 comments:

nIlagrIva said...

I had my doubts when I saw the advertisement for this play. You can't do justice to Mandra in 1.5 hrs.Since they had labeled it an experiment, they feel that they are somehow justified.

Also, do you think non-readers of Mandra would benefit from this play as some sort of an intro to the book?

Thanks for the patience in attending the play and letting us know that it indeed tests the viewers. You've saved me some time.

ಮಂಜು ಶಂಕರ್ said...

@ನೀಲಗ್ರೀವ

೧.೫ ಘಂಟೆ ನಾಟಕದಲ್ಲಿ 'ಮಂದ್ರ' ಕಥೆಗೆ ನ್ಯಾಯ ಒದಗಿಸೋದಕ್ಕೆ ಆಗಲ್ಲ ನಿಜ. ಆದ್ರೆ ಮಧ್ಯ ಒಂದು ವಿರಾಮ ಕೊಡ್ಬೇಕಿತ್ತು. ಸಂಗೀತ ಇನ್ನೂ ಜಾಸ್ತಿ ಇರ್ಬೇಕು - ಇದನ್ನ ಸಂಗೀತಗಾರರಿಗೆ ಹೇಳಿದ್ದೀನಿ - ಸಂಗೀತದ ಜೊತೆ ಕತೆನೂ ಸಾಗೋ ಹಾಗೆ ಮಾಡ್ಬೇಕು ಅಂತ! ಮುಂದಿನ ಪ್ರದರ್ಶನಕ್ಕೆ ಸ್ವಲ್ಪ ಬದಲಾವಣೆಗಳು ಬರಬಹುದು.

ಮಂದ್ರ ಓದಿಲ್ಲದೋರಿಗೆ ಇನ್ನೂ ಮಜ ಕೊಡತ್ತೆ ಅನ್ಸತ್ತೆ. ಓದಿದ್ದವರಿಗೆ ಮೋಹನ್ ಲಾಲ್ ನ ರಸಿಕತನದ ಪರಿಚಯ ಓದುವಾಗ ಇನ್ನೂ ಚೆನ್ನಾಗಿ ಆಗಿರತ್ತೆ ;-)

-ಹಾಲ said...

ಮಂಜು ನಾಟಕದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ....